50ನೇ ಸಿಜೆಐ ಆಗಿ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌: ಹಾಲಿ ಸಿಜೆಐ ಯುಯು ಲಲಿತ್‌ ಶಿಫಾರಸು

Ad Code

50ನೇ ಸಿಜೆಐ ಆಗಿ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌: ಹಾಲಿ ಸಿಜೆಐ ಯುಯು ಲಲಿತ್‌ ಶಿಫಾರಸು



ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ. ಅವರು ಮಂಗಳವಾರ ಬೆಳಗ್ಗೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರವನ್ನು ಹಸ್ತಾಂತರಿಸಿ, ಅವರನ್ನು ಮುಂದಿನ ಸಿಜೆಐ ಎಂದು ಶಿಫಾರಸು ಮಾಡಿದರು.  ಸುಪ್ರೀಂ ಕೋರ್ಟ್‌ನ ಇತರ ನ್ಯಾಯಾಧೀಶರ ಸಮ್ಮುಖದಲ್ಲಿ ಪತ್ರವನ್ನು ಹಸ್ತಾಂತರಿಸಲಾಯಿತು.


ನ್ಯಾಯಮೂರ್ತಿ ಲಲಿತ್ ಅವರು ಈ ವಿಷಯದ ಬಗ್ಗೆ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆಯಲಿದ್ದಾರೆ. ನ್ಯಾ.ಮೂ. ಯು.ಯು ಲಲಿತ್ ಅವರು ನವೆಂಬರ್‌ 8ರಂದು ನಿವೃತ್ತರಾಗಲಿದ್ದು, ಅವರ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕಳೆದ ವಾರ, ಕೇಂದ್ರ ಸರ್ಕಾರ ಅವರನ್ನು ಕೇಳಿತ್ತು. ಅದರಂತೆ ಸಿಜೆಐ ಲಲಿತ್ ಅವರು ಈಗ ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸಿದ್ದಾರೆ.  ನ್ಯಾಯಮೂರ್ತಿ ಎನ್‌ವಿ ರಮಣ ಅವರ ನಿವೃತ್ತಿಯ ನಂತರ ಆಗಸ್ಟ್‌ನಲ್ಲಿ ನ್ಯಾಯಮೂರ್ತಿ ಲಲಿತ್‌ ಅಧಿಕಾರ ವಹಿಸಿಕೊಂಡಿದ್ದರು.


ಶಿಷ್ಟಾಚಾರದ ಪ್ರಕಾರ, ಕಾನೂನು ಸಚಿವಾಲಯವು  ಉತ್ತರಾಧಿಕಾರಿಯ ಹೆಸರನ್ನು ಪಡೆಯಲು ನಿವೃತ್ತಿಯ ನಿಗದಿತ ದಿನಾಂಕದ ಸುಮಾರು ಒಂದು ತಿಂಗಳ ಮೊದಲು ಸಿಜೆಐಗೆ ಪತ್ರ ಬರೆಯುತ್ತದೆ. ಇದಕ್ಕೆ ಉತ್ತರವನ್ನು ಸಾಮಾನ್ಯವಾಗಿ ನಿವೃತ್ತಿ ದಿನಾಂಕದ 28 ಮತ್ತು 30 ದಿನಗಳ ಮೊದಲು ಕಳುಹಿಸಲಾಗುತ್ತದೆ. ಸಂಪ್ರದಾಯದಂತೆ, ಸಿಜೆಐ ಅವರ ಉತ್ತರಾಧಿಕಾರಿಯಾಗಿ ಹಿರಿತನದ ದೃಷ್ಟಿಯಿಂದ ತಮ್ಮ ನಂತರದವರನ್ನೇ ಆಯ್ಕೆ ಮಾಡುತ್ತಾರೆ.


ನ್ಯಾಯಮೂರ್ತಿ ಯುಯು ಲಲಿತ್ ನಿವೃತ್ತಿಯ ಬಳಿಕ ಜಸ್ಟಿಸ್‌ ಡಿ.ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟಿನ 50 ನೇ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಲಿದ್ದಾರೆ.  ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನವೆಂಬರ್ 10, 2024 ರಂದು ನಿವೃತ್ತರಾಗಲಿದ್ದಾರೆ.


2004ರ ಏಪ್ರಿಲ್‌ನಲ್ಲಿ ಉನ್ನತ ನ್ಯಾಯಾಲಯದಿಂದ ಹಿರಿಯ ವಕೀಲರಾಗಿ ನೇಮಕಗೊಂಡ ಸಿಜೆಐ ಯುಯು ಲಲಿತ್, ಜೂನ್, 1983ರಲ್ಲಿ ವಕೀಲರಾಗಿ ದಾಖಲಾಗಿದ್ದರು. ಅವರು ಎರಡು ಅವಧಿಗೆ ಭಾರತದ ಸುಪ್ರೀಂ ಕೋರ್ಟ್‌ನ ಕಾನೂನು ಸೇವೆಗಳ ಸಮಿತಿಯ ಸದಸ್ಯರಾಗಿದ್ದರು. ಅವರು 2014 ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು.


ಏತನ್ಮಧ್ಯೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಈ ಹಿಂದೆ 1998 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅವರು 2013 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಬಾಂಬೆ ಹೈಕೋರ್ಟ್‌ ನಲ್ಲೂ ಸೇವೆ ಸಲ್ಲಿಸಿದ್ದರು. ಅವರು 2016 ರಲ್ಲಿ ಉನ್ನತ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಬಡ್ತಿ ಪಡೆದರು.


web counter

Post a Comment

0 Comments