ಭವ್ಯ ಕಾಶಿ- ದಿವ್ಯ ಕಾಶಿ: ಮಹತ್ವಾಕಾಂಕ್ಷೆಯ ವಿಶ್ವನಾಥ ಕಾರಿಡಾರ್‌ ನಾಳೆ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ

Ad Code

ಭವ್ಯ ಕಾಶಿ- ದಿವ್ಯ ಕಾಶಿ: ಮಹತ್ವಾಕಾಂಕ್ಷೆಯ ವಿಶ್ವನಾಥ ಕಾರಿಡಾರ್‌ ನಾಳೆ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ


ವಾರಾಣಸಿ: ಕಾಶಿ ಅತ್ಯಂತ ಪ್ರಾಚೀನ ಪೌರಾಣಿಕ ನಗರ. ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕೃತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಪುರಾತನವಾದ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಮತ್ತು ಸುಂದರೀಕರಣದ ಅದ್ಭುತ ಕೆಲಸಗಳು ನಡೆದಿದ್ದು, ನವೀಕೃತ ಧಾರ್ಮಿಕ ನಗರವನ್ನು ನರೇಂದ್ರ ಮೋದಿಜಿಯವರು ಡಿಸೆಂಬರ್ 13ರಂದು (ಸೋಮವಾರ) 11:00 ಗಂಟೆಗೆ ಕಾಶಿಯಲ್ಲಿ ಉದ್ಘಾಟಿಸಲಿದ್ದಾರೆ.


ವಾರಾಣಸಿಯ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಮಹಾತ್ವಾಕಾಂಕ್ಷೆಯ ಕಾಶಿ ವಿಶ್ವನಾಥ ಕಾರಿಡಾರ್‌ ಅನ್ನು ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಆರಾಧನೆಗಳು ನಡೆಯಲಿವೆ.


ಈ ಸಂಬಂಧ ಇಂದು ಪ್ರಧಾನಿ ಮೋದಿ ಅವರು ವಾರಾಣಸಿ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದು, ನದಿಯಲ್ಲಿ ವಿಶೇಷ ನೌಕೆಯಲ್ಲಿ ಕುಳಿತುಕೊಂಡೇ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಅನೌಪಚಾರಿಕವಾಗಿ ವಿಶೇಷ ಸಭೆ ನಡೆಸಿದ್ದಾರೆ. ನಾಳಿನ ಕಾರ್ಯಕ್ರಮವನ್ನು ದೇಶಾದ್ಯಂತ ಉತ್ಸವದ ಮಾದರಿಯಲ್ಲಿ ಆಚರಿಸುವಂತೆ ಸೂಚನೆಗಳನ್ನು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ದಶಾಶ್ವಮೇಧ ಘಾಟ್‌ ಸಮೀಪವಿರುವ ಐತಿಹಾಸಿಕ ಮತ್ತು ಪೌರಾಣಿಕವಾದ ಕಾಶಿ ವಿಶ್ವನಾಥ ಮಂದಿರದ ಸುತ್ತಲೂ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಉದ್ಘಾಟಿಸಲಾಗುತ್ತಿದೆ. 




ಶನಿವಾರದಂದು ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಬಲರಾಮ್ ಪುರ ಜಿಲ್ಲೆಯಲ್ಲಿ ಸರಯೂ ಕಾಲುವೆಯ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, 'ಒಬ್ಬ ವ್ಯಕ್ತಿ ಈ ಯೋಜನೆಗಳಿಗಾಗಿ ರಿಬ್ಬನ್ ಕತ್ತರಿಸಿದ್ದಕ್ಕೇ ಯೋಜನೆಯ ಶ್ರೇಯಸ್ಸು ತಮ್ಮದು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ನೆನಪಿಟ್ಟುಕೊಳ್ಳಿ, ಈ ಯೋಜನೆಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿದ್ದು ಬಿಜೆಪಿ ಸರಕಾರ' ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್‌ ಅವರಿಗೆ ಪರೋಕ್ಷವಾಗಿ ಕುಟುಕಿದರು.


ಗೇಟ್‌ವೇಗಳು (ಪ್ರಧಾನ ದ್ವಾರಗಳು) ಮತ್ತು ಇತರ ರಚನೆಗಳನ್ನು ಶಿಲೆಗಳಿಂದ ನಿರ್ಮಿಸಲಾಗಿದ್ದು, ಸಂಪೂರ್ಣ ಪಾರಂಪರಿಕ ವಾಸ್ತುಶೈಲಿಯಲ್ಲಿ ರಚಿಸಲಾಗಿದೆ.


ನಾಳೆ (ಡಿ.13) ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಶ್ರೀ ಕಾಶಿ ವಿಶ್ವನಾಥ ಧಾಮದ ಮೊದಲನೆ ಹಂತದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಒಟ್ಟು 339 ಕೋಟಿ ರೂ ವೆಚ್ಚದಲ್ಲಿ ಇವನ್ನೆಲ್ಲ ನಿರ್ಮಿಸಲಾಗಿದೆ.


ಪ್ರವಾಸೋದ್ಯಮದ ಜತೆಗೆ ಭಾರತದ ಪಾರಂಪರಿಕ ವೈಭವ ಮತ್ತು ಸಂಸ್ಕೃತಿ ಬಿಂಬಿಸುವ ಉದ್ದೇಶದಿಂದ ಈ ಮೂಲ ಸೌಕರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರಸ್ತುತ ತೀರಾ ಇಕ್ಕಟ್ಟಾದ ಸ್ಥಳದಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಆಗಮಿಸುವ ಭಕ್ತರಿಗೆ ಭಗವಾನ್ ಶಿವನ ದರ್ಶನ ಸುಗಮವಾಗಿ ಆಗುವಂತೆ ಮಾಡಲು ದೂರದೃಷ್ಟಿಯ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಹಾಕಿಕೊಂಡಿದ್ದಾರೆ.


ಮೊದಲ ಹಂತದ ಯೋಜನೆಯಲ್ಲಿ ಒಟ್ಟು 23 ಕಟ್ಟಡಗಳನ್ನು ಉದ್ಘಾಟಿಸಲಾಗುತ್ತಿದೆ. ಯಾತ್ರಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಇವುಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಮತ್ತಿತರ ಸೌಲಭ್ಯಗಳು, ವೈದಿಕ ಕೇಂದ್ರ, ಮುಮುಕ್ಷು ಭವನ, ಭೋಗಶಾಲೆ (ಭೋಜನಶಾಲೆ), ನಗರದ ವಸ್ತುಸಂಗ್ರಹಾಲಯ, ವೀಕ್ಷಣಾ ಗ್ಯಾಲರಿ, ಫುಡ್‌ ಕೋರ್ಟ್‌ ಸೇರಿದಂತೆ ಹಲವು ಸೌಲಭ್ಯಗಳು ಈಗ ನಿರ್ಮಾಣಗೊಂಡಿವೆ.


ವಿಶ್ವನಾಥ ಮಂದಿರದ ಸುತ್ತಲೂ 300ಕ್ಕೂ ಹೆಚ್ಚು ಆಸ್ತಿಗಳ ಖರೀದಿ ಮತ್ತು ಸ್ವಾಧೀನತೆ ಕೂಡ ಈ ಯೋಜನೆಯಲ್ಲಿ ಸೇರಿದೆ. ಪ್ರಸ್ತುತ ಯೋಜನೆಯ ಪ್ರದೇಶವು 5 ಲಕ್ಷ ಚದರ ಅಡಿಗಿಂತಲೂ ಹೆಚ್ಚು ವಿಸ್ತಾರವಾಗಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಈ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಂಡಿವೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.


ಈಗಿರುವ ವಿಶ್ವನಾಥ ಮಂದಿರವನ್ನು 1780ರಲ್ಲಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ನಿರ್ಮಿಸಿದ್ದರು. 19ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ಮಂದಿರಕ್ಕೆ ಸುವರ್ಣ ಶಿಖರವನ್ನು ನಿರ್ಮಿಸಿದ್ದರು.


2014ರಿಂದ ಪ್ರಧಾನಿ ಮೋದಿ ಅವರು ಈ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇದೀಗ 'ದಿವ್ಯ ಕಾಶಿ- ಭವ್ಯ ಕಾಶಿ' ಹೆಸರಿನ ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ವಾರಾಣಿಸಿಯ ಜತೆಯಷ್ಟೇ ಅಲ್ಲ, ಇಡೀ ದೆಶದ ಜನರು ಕಾತರರಾಗಿದ್ದಾರೆ.


ಭವ್ಯವಾದ ದೀಪಗಳ ಅಲಂಕಾರದಿಂದ ಕಾಶಿ ಕ್ಷೇತ್ರ ಕಂಗೊಳಿಸುತ್ತಿದೆ. ಕಾಶಿ ವಿಶ್ವನಾಥ ಧಾಮದ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಸರಕಾರಗಳ ಎಲ್ಲ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ದೇಶಾದ್ಯಂತ 51,000 ಸ್ಥಳಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗುತ್ತಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments