ಕರ್ನಾಟಕದ ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ಲೇೂಕಸಭಾಧ್ಯಕ್ಷ ಓಂ ಬಿರ್ಲಾರವರು ಮುಖ್ಯ ಅತಿಥಿ ಅಭ್ಯಾಗತರಾಗಿ ಸಂಸದೀಯ ಮೌಲ್ಯಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡುವ ಒಂದು ವಿಶೇಷ ಸಭಾ ಕಾರ್ಯಕ್ರಮವನ್ನು ರಾಜ್ಯ ವಿಧಾನಸಭಾಧ್ಯಕ್ಷರು ನಡೆಸಲು ಮುಂದಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ತಾವು ಹಾಜರಾಗುವುದಿಲ್ಲ ಮಾತ್ರವಲ್ಲ, ಇದೊಂದು ಸಂಸದೀಯ ನಡವಳಿಕೆಗೆ ವಿರುದ್ಧವಾದ ನಡೆ ಅನ್ನುವ ಕಾರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿಕೆಶಿಯವರು ತಮ್ಮ ಪಕ್ಷ ಇದನ್ನು ವಿರೇೂಧಿಸುತ್ತದೆ, ಮಾತ್ರವಲ್ಲ ತಮ್ಮ ಪಕ್ಷದ ಶಾಸಕರು ಭಾಗವಹಿಸುವುದಿಲ್ಲ ಎಂಬ ಹೇಳಿಕೆಯನ್ನು ಈಗಾಗಲೇ ನೀಡಿದ್ದಾರೆ.
ಅವರು ಹೇಳುವುದೆಂದರೆ ಸಂಸತ್ತಿನ ಅಥವಾ ವಿಧಾನಸಭೆಯಲ್ಲಿ ರಾಷ್ಟ್ರಪತಿಗಳು, ರಾಜ್ಯಪಾಲರು ಮಾತ್ರ ಭಾಗವಹಿಸಿ ಮಾತನಾಡಬಹುದು. ಇದು ಸಂಸದೀಯ ನಡಾವಳಿಕೆಯ ಗೌರವ ಘನತೆ ಅನ್ನುವ ವಿಚಾರ ಪ್ರಸ್ತಾವನೆ ಮಾಡಿದ್ದಾರೆ. ಒಪ್ಪಿಕೊಳ್ಳೋಣ. ಆದರೆ ಇದರ ಜೊತೆಗೆ ಸಂಸದೀಯ ನಡವಳಿಕೆಯ ಬಗ್ಗೆ ಕಾಳಜಿಯುಕ್ತವಾಗಿ ಮಾತನಾಡುವವರಿಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಬೇಕಾದ ಪ್ರಸಂಗ ಅವರೇ ತಂದು ಕೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹಾಗೂ ಕಾಂಗ್ರೆಸ್ ಪಕ್ಷ ಉತ್ತರಿಸಬೇಕಾಗಿದೆ.
1. ಪ್ರಜಾಪ್ರಭುತ್ವದ ದೇಗುಲ ಅನ್ನಿಸಿಕೊಂಡ ವಿಧಾನ ಸಭೆಯಲ್ಲಿ ಆಗಲಿ ಲೇೂಕಸಭೆ ಅಥವಾ ರಾಜ್ಯಸಭೆಯಲ್ಲಿ ಆಗಲಿ ನೀವೇ ಹೇಳಿರುವ ಗೌರವಾನ್ವಿತ ಸಭಾಧ್ಯಕ್ಷರಿಗೆ ಯಾವ ರೀತಿಯಲ್ಲಿ ನಾವು ಮರ್ಯಾದೆ ಗೌರವ ಕೊಡುತ್ತಿದ್ದೇವೆ ಅನ್ನುವುದನ್ನು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
2. ಸಭಾಧ್ಯಕ್ಷರ ಮುಖಕ್ಕೆ ಸಂಸದೀಯ ನಿಯಮಾವಳಿಯ ಪವಿತ್ರ ಪುಸ್ತಕ ಹರಿದು ಬಿಸಾಡುವುದು ಸಂಸದೀಯ ನಿಯಮಾವಳಿಯೇ?
3. ಸಭಾಧ್ಯಕ್ಷರ ಸ್ಥಾನಕ್ಕೆ ಕಚ್ಚಾಡಿ ಎಳೆದಾಡುವುದು ನಮ್ಮ ಸಂಸದೀಯ ಸಂಪ್ರದಾಯವೇ?
4. ವಿಧಾನಸಭೆಯಲ್ಲಿ ವಿಷಯಗಳ ಕುರಿತಾಗಿ ಗಂಭೀರವಾಗಿ ಅಧ್ಯಯನ ಮಾಡದೆ ವೈಯಕ್ತಿಕ ವಿಚಾರಗಳ ಕುರಿತಾಗಿಯೇ ಮಾತನಾಡಿ ಕಾಲಹರಣ ಮಾಡುವುದು ನಮ್ಮ ಸಂಸದೀಯ ಉತ್ತಮ ನಡವಳಿಕೆಯೇ?
ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ವಿಪಕ್ಷ ಮತ್ತು ಅಧಿಕಾರರೂಢ ಪಕ್ಷಗಳು ಉತ್ತರಿಸಬೇಕಾದ ವಿಶೇಷ ಅಧಿವೇಶನವೂ ಇದಾಗಬೇಕಾಗಿದೆ ಅನ್ನುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಮತದಾರರ ಹಕ್ಕೊತ್ತಾಯವೂ ಹೌದು.
"Parliament is the mirror of national mind" ಆಂದರೆ ನಮ್ಮ ಜನಪ್ರತಿನಿಧಿ ಸದನಗಳು 'ಜನರ ಮನಸ್ಸಿನ ದರ್ಪಣ'ವಾಗಬೇಕು. ಒಟ್ಟಿನಲ್ಲಿ ಸಂಸದೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಇಂತಹ ಪಾಠ ಪ್ರವಚನಗಳು ನಡೆಯ ಬೇಕಾದದ್ದು ಅಗತ್ಯ. ಆದರೆ ಇಂತಹ ಪಾಠ ಪ್ರವಚನಗಳು ಅವರ ಮೇಲೆ ಎಷ್ಟು ಪರಿಣಾಮ ಬೀರಬಹುದು ಅನ್ನುವುದು ಇನ್ನೊಂದು ದೊಡ್ಡ ಪ್ರಶ್ನೆ.
ಈ ಹೊಸ ಸಂಪ್ರದಾಯಲ್ಲಿ ತಪ್ಪೇನಿದೆ?
1. ವಿಧಾನ ಮಂಡಲದ ಜಂಟೀ ಅಧಿವೇಶನ ನಡೆದಾಗ ವಿಧಾನ ಸಭೆಯ ಅಧ್ಯಕ್ಷರೇ ಸಭಾಧ್ಯಕ್ಷತೆ ವಹಿಸುತ್ತಾರೆ. ಅದೇ ರೀತಿಯಲ್ಲಿ ಲೇೂಕಸಭಾಧ್ಯಕ್ಷರು ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ವಿಧಾನಸಭೆಯ ಅಧ್ಯಕ್ಷರೇ ಅಧ್ಯಕ್ಷತೆವಹಿಸಿ ಅವರ ಸ್ಥಾನದಲ್ಲಿ ಇರಬೇಕು. ಲೇೂಕಸಭಾ ಅಧ್ಯಕ್ಷರು ಪ್ರಧಾನ ಅತಿಥಿಯಾಗಿ ವೇದಿಕೆಯಲ್ಲಿ ಆಸೀನರಾಗಬೇಕು. ಉದಾಹರಣೆಗೆ, ಅಮೇರಿಕಾದಲ್ಲಿ ನಮ್ಮ ಪ್ರಧಾನಿಗಳು ವಿಶೇಷ ಉಪನ್ಯಾಸ ಮಾಡಿದ ಮಾಡಿದ ಸಂದರ್ಭದಲ್ಲಿ ಇದೇ ಶಿಷ್ಟಾಚಾರ ಪಾಲಿಸಿದ್ದಾರೆ.
2. ನಮ್ಮದು ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂಸದೀಯ ಪದ್ದತಿಯ ಸರಕಾರವಿರುವಾಗ ಕೇಂದ್ರ ಸಂಸತ್ತಿನ ಅಧ್ಯಕ್ಷರನ್ನು ಆಷ್ಟೊಂದು ನಿಷಿದ್ಧವಾಗಿ ಕಾಣುವುದರಲ್ಲಿಯೂ ಅರ್ಥವಿಲ್ಲ. ಯಾಕೆಂದರೆ ರಾಜ್ಯದ ಕೆಲವೊಂದು ಮಸೂದೆಗಳು ಕೆಲ ಸಂದರ್ಭದಲ್ಲಿ ಕೇಂದ್ರ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯ ಬೇಕಾಗಿರುವಾಗ ಲೇೂಕ ಸಭಾಧ್ಯಕ್ಷರನ್ನು ಅಷ್ಟೊಂದು ದೂರ ಮಾಡುವ ಸಂಪ್ರದಾಯವೂ ಸರಿಯಲ್ಲ. ಮಾತ್ರವಲ್ಲ ರಾಜ್ಯದಲ್ಲಿ ವಿಧಾನ ಸಭೆ ಅಸ್ತಿತ್ವದಲ್ಲಿ ಇಲ್ಲದಿರುವಾಗ ರಾಜ್ಯ ಬಜೆಟ್‌ಗೆ ಒಪ್ಪಿಗೆ ನೀಡಬೇಕಾದದ್ದು ಲೇೂಕಸಭೆ. ಹಾಗೆನ್ನುವಾಗ ಲೇೂಕ ಸಭಾಧ್ಯಕ್ಷರನ್ನು ವಿಧಾನಸಭೆಯಿಂದ ದೂರವಿಡುವುದರಲ್ಲಿ ಯಾವ ಅರ್ಥವೂ ಇಲ್ಲ.
ಒಂದಂತೂ ಸತ್ಯ ಈಗ ಅಪಸ್ವರ ಬಂದಿರುವುದು ಸಂಸದೀಯ ಸಂಪ್ರದಾಯ ಅನ್ನುವುದಕ್ಕಿಂತ ರಾಜಕೀಯ ನಿರ್ಧಾರ ಅನ್ನುವುದು ಅಷ್ಟೇ ಸತ್ಯ. ರಾಜ್ಯಪಾಲರ ಭಾಷಣವನ್ನೆ ಬಹಿಷ್ಕರಿಸಿ ಸದನದಿಂದ ಹೊರಗೆ ನಡೆಯುವ ಕಾಲದಲ್ಲಿ ಇದೇನು ಮಹಾ ಬಹಿಷ್ಕಾರ? ನಿಮ್ಮ ಅಭಿಪ್ರಾಯವೂ ಮೂಡಿ ಬರಲಿ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments