ಐ.ಟಿ. ದಾಳಿ ಯಡಿಯೂರಪ್ಪನವರ ಆಡಳಿತದ ಮೇಲೆ ನಡೆದ ಅಗ್ನಿ ಪರೀಕ್ಷೆಯೇ?

Ad Code

ಐ.ಟಿ. ದಾಳಿ ಯಡಿಯೂರಪ್ಪನವರ ಆಡಳಿತದ ಮೇಲೆ ನಡೆದ ಅಗ್ನಿ ಪರೀಕ್ಷೆಯೇ?



ಇತ್ತೀಚಿನ ವರುಷಗಳಲ್ಲಿ ಐ.ಟಿ, ಇ.ಡಿ ದಾಳಿಗಳೆಂದರೆ ವಿರೇೂಧ ಪಕ್ಷಕ್ಕೆ ಸಂಬಂಧ ಪಟ್ಟವರ ಮೇಲೆ ಮೊದಲ ಟಾರ್ಗೆಟ್ ಅನ್ನುವುದು ಪ್ರಚಲಿತವಾಗಿದ್ದ ಸುದ್ದಿಯಾಗಿತ್ತು. ಆದರೆ ಮೊನ್ನೆ ನಡೆದ ದಾಳಿ ಮಾತ್ರ ಆಡಳಿತ ಪಕ್ಷ ಮತ್ತು ವಿರೇೂಧ ಪಕ್ಷಗಳ ಬಾಯಿ ಮುಚ್ಚುವ ತರದಲ್ಲಿ ನಡೆದ ಐ.ಟಿ. ದಾಳಿ ಅನ್ನುವುದು ಸಾಬೀತಾಗಿದೆ. ಇದಕ್ಕೆ ಮುಖ್ಯ ಕಾರಣ ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಉಮೇಶ್ ಅನ್ನುವ ವ್ಯಕ್ತಿ ಕೆಲವೇ ವರುಷಗಳಲ್ಲಿ ನೂರಾರು ಕೇೂಟಿ ಧನಿಕನಾದವನ ಮನೆಯ ಕದ ತಟ್ಟಿದ ಐ.ಟಿ. ದಾಳಿಯ ಕುರಿತಾಗಿ ವಿರೇೂಧ ಪಕ್ಷ ನಾಯಕರು ಹಾಗೂ ಆಡಳಿತ ಪಕ್ಷ ನಾಯಕರುಗಳ ಬಾಯಿ ಮುಚ್ಚಿಸಿರುವುದಂತು ಸತ್ಯ.ಇದಕ್ಕೂ ಹಲವು ಕಾರಣಗಳಿವೆ.


ಐ.ಟಿ. ದಾಳಿ ನಡೆದ ವ್ಯಕ್ತಿ ಬಿಜೆಪಿಯ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳು ಆದ ಯಡಿಯೂರಪ್ಪನವರ ಕುಟುಂಬದ ವ್ಯವಹಾರಗಳಿಗೆ ತೀರ ಹತ್ತಿರದ ವ್ಯಕ್ತಿ. ಹಾಗಾಗಿ ಮಧ್ಯಮಗಳಲ್ಲಿ ಈ ದಾಳಿಗೆ ಸುದ್ದಿಯ ಲೇಪನ ಹಚ್ಚುವಾಗ ಉಮೇಶ್‌ಗಿಂತಲೂ ಯಡಿಯೂರಪ್ಪನವರ ಮೇಲೆ ಹೆಚ್ಚು ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ. ಹಾಗೆನ್ನುವಾಗ ವಿಪಕ್ಷಗಳು ಇದನ್ನೊಂದು ದೊಡ್ಡ ಸುದ್ದಿ ಮಾಡಿ ಬಿಜೆಪಿ ಭ್ರಷ್ಟಾಚಾರದ ಕೂಪವೆಂದು ಬೊಬ್ಬೆ ಹೊಡೆದು ಮೇೂದಿಯ ಕಡೆಗೆ ಬೆರಳು ತೇೂರಿಸಬಹುದಿತ್ತು. ಅದನ್ನೂ ಮಾಡದೇ ಸುಮ್ಮನೆ ಕೂತಿರುವುದು ಆಶ್ಚರ್ಯವಲ್ಲವೇ? ಹೇಗೂ ಎರಡು ಉಪಚುನಾವಣೆ ಹತ್ತಿರ ಬಂತು. ಆದರೂ ಕಾಂಗ್ರೆಸ್ ತುಟಿ ಪಿಟಕ್ ಅನ್ನದೆ ಕುಳಿತು ಕೊಂಡಿದೆ. ಇದಕ್ಕೂ ಹಲವು ಕಾರಣವಿದೆ.


ಕಾಂಗ್ರೆಸ್ ಸುಮ್ಮನೆ ಕೂರಲು ಬಹುಮುಖ್ಯವಾದ ಕಾರಣ...


1. ಹೇಗೂ ತಮ್ಮಮೇಲೆ ಐ.ಟಿ. ದಾಳಿ ನಡೆದಾಗ ಏಕ ಪಕ್ಷೀಯ ದಾಳಿ ವಿರೇೂಧಿಗಳನ್ನು ಮುಗಿಸುವ ದಾಳಿ ಎಂದು ಹೇಳಿದ ಕಾಂಗ್ರೆಸ್ ಗೆ ಈಗ ಬಿಜೆಪಿ ಸಮಜಾಯಿಸಿ ಉತ್ತರ ನೀಡಬಹುದು. ಇದು ಪಕ್ಷ, ವ್ಯಕ್ತಿ ಮೀರಿದ ದಾಳಿ ಅನ್ನುವ ವಾದ ಮಂಡಿಸಲು ಕಾಂಗ್ರೆಸ್ ಪಕ್ಷವೇ ಬಿಜೆಪಿಗೆ ಸುಲಭ ದಾರಿ ಮಾಡಿಕೊಟ್ಟ ಹಾಗೆ ಆಗಬಹುದು. ಆದುದರಿಂದ ಸುಮ್ಮನೆ ಕುಳಿತು ಚೆಂದ ನೇೂಡುವುದೇ ವಾಸಿ ಅನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿರಬೇಕು?


2. ಆದರೆ ಇದು ಕಾಂಗ್ರೆಸ್ ಮುಂದಿರುವ ಸಣ್ಣ ಕಾರಣ ಬಲವಾದ ಕಾರಣವಿದೆ. ಇದೇ ಕಾಂಗ್ರೆಸ್ ನಾಯಕರು ನಾಳೆ ನಮ್ಮ ಯಡಿಯೂರಪ್ಪನವರ ಪರವಾಗಿ ಬ್ಯಾಟ್ ಬೀಸಿದರೂ ಆಶ್ಚರ್ಯವಿಲ್ಲ. "ಇಂದು ಕಾಂಗ್ರೆಸ್  ಮುಗಿಸಲು ಹೊರಟಿದೆ ನಾಳೆ ಯಡಿಯೂರಪ್ಪನವರ ಕುಟುಂಬದವರ ರಾಜಕೀಯ ಭವಿಷ್ಯವನ್ನು ಮುಗಿಸಲು ಬಿಜೆಪಿ ಹೆೈಕಮಾಂಡ್ ಮುಂದಾಗಿದೆ". ಕಾಂಗ್ರೆಸ್ ಈ ಮಾತು ಈ ತಂತ್ರಗಾರಿಕೆ ಕಾಂಗ್ರೆಸ್ ಗೆ ಹೆಚ್ಚು ಲಾಭ ತರಬಲ್ಲ ಲೆಕ್ಕಾಚಾರ ಅನ್ನುವುದು ಸದ್ಯದ ಮೌನಕ್ಕೆ ಕಾರಣವಿರಲೂಬಹುದು?


3. ಕಾಂಗ್ರೆಸಿನ ಲೆಕ್ಕಾಚಾರ ಏನೇ ಇರಲಿ ಒಂದಂತೂ ಸತ್ಯ ಯಡಿಯೂರಪ್ಪನವರ ಅತೀ ಆಪ್ತನ ಮನೆಯ ಮೇಲೆ ನಡೆದ ದಾಳಿ ಮಾತ್ರ ಬಿಜೆಪಿ ಒಳಗೆ ತಲ್ಲಣ ಮೂಡಿಸಿರುವುದಂತೂ ನೂರಕ್ಕೆ ನೂರು ಸತ್ಯ. ಬಿಜೆಪಿ ಒಳಗೆ ಯಡಿಯೂರಪ್ಪನವರ ರಾಜಕೀಯ ನಾಗಾಲೇೂಟಕ್ಕೆ ಕಡಿವಾಣ ಹಾಕುವಲ್ಲಿ ಬಹು ವ್ಯವಸ್ಥಿತವಾಗಿ ನಡೆದ ಐ.ಟಿ. ದಾಳಿ ಅನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ವಿಶ್ಲೇಷಣೆಯೂ ಹೌದು.


ಯಡಿಯೂರಪ್ಪನವರನ್ನು ನಿಧಾನವಾಗಿ ರಾಜಕೀಯವಾಗಿ ಕಟ್ಟಿ ಹಾಕುವ ತಂತ್ರಗಾರಿಕೆ ಇದರೊಳಗೆ ಇದೇ ಅನ್ನುವುದು ಮೇಲ್ನೋಟಕ್ಕೆ ಕಾಣುವ ತಂತ್ರಗಾರಿಕೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಇನ್ನೊಬ್ಬ ಜಾತಿ ಬೆಂಬಲವಿಲ್ಲದ ಸಂಘ ಪರಿವಾರದ ವ್ಯಕ್ತಿಯನ್ನು ಆಧ್ಯಕ್ಷರನಾಗಿ ಮಾಡಿದ್ದು; ಎರಡು ವರುಷಗಳ "ಕ್ವಾಂಟ್ರ್ಯಾಕ್ಟ್‌ ಮುಖ್ಯಮಂತ್ರಿ" ಹುದ್ದೆಯಿಂದ ಪ್ರಾಯದ ನೆಪ ಒಡ್ಡಿ ಕೆಳಗೆ ಇಳಿಸಿದ್ದು; ಮಾತ್ರವಲ್ಲ ಅವರ ತಿರುಗಾಟಕ್ಕೂ ಬ್ರೇಕ್ ಹಾಕಿದ್ದು; ಮಗನಿಗೂ ಮುಂಗೈ ಗಂಟಿಗೆ ಬೆಲ್ಲ ಹಚ್ಚುವ ಆಸೆ ತೇೂರಿಸಿದ್ದು; ಅಂತೂ ಕೊನೆಗೂ ಪ್ರತ್ಯಕ್ಷವಲ್ಲವಾದರೂ ಪರೇೂಕ್ಷವಾಗಿ ಯಡಿಯೂರಪ್ಪ ನವರಿಗೆ ತಮ್ಮ ಆಪ್ತನ ಮೂಲಕ ಆದಾಯ ಇಲಾಖೆಯ ಪರಿಚಯ ಮಾಡಿಸಿದ್ದು... ಇವೆಲ್ಲವೂ ಯಡಿಯೂರಪ್ಪ ನವರ ಆಡಳಿತದ ಪ್ರಾಮಾಣಿಕತೆಯ ಮೇಲೆ ನಡೆದ ಅಗ್ನಿ ಪರೀಕ್ಷೆ ಎಂದೇ ರಾಜಕೀಯ ವಲಯದಲ್ಲಿ ಬಹು ಚರ್ಚಿತವಾಗುತ್ತಿರುವ ಸುದ್ದಿ ಮಾತ್ರವಲ್ಲ, ರಾಜಕೀಯ ಸಂಚಲನ ಮೂಡಿಸಿದ ಐ.ಟಿ. ದಾಳಿ ಅನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದ ಮಾತು ಹೌದು.

-ಪ್ರೊ. ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments