ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ದೀಪೋತ್ಸವದ ನಿಮಿತ್ತ ನಿನ್ನೆ ಶೋಭಾ ಯಾತ್ರೆ ಆರಂಭವಾಗಿದೆ. ಉತ್ತರಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದ್ದಾರೆ. ಅವಧ್ ಯೂನಿರ್ವಸಿಟಿಯ ವಿದ್ಯಾರ್ಥಿಗಳು ಅಯೋಧ್ಯೆಯಲ್ಲಿ ಸುಂದರವಾದ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ ಕಳೆಗಟ್ಟಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟು 12 ಲಕ್ಷ ಹಣತೆಗಳನ್ನು ಬೆಳಗಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ತಯಾರಾಗಿದೆ. ಅದರಲ್ಲಿ ಒಟ್ಟು 9 ಲಕ್ಷ ಮಣ್ಣಿನ ದೀಪಗಳನ್ನು ಸರಯೂ ನದಿಯ ದಡದಲ್ಲಿ ಬೆಳಗಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ಕಳೆದ ಬಾರಿಯ ದೀಪಾವಳಿಗಿಂತಲೂ ಹೆಚ್ಚಿನ ದೀಪಗಳನ್ನು ಈ ಬಾರಿ ಬೆಳಗಿಸಲಾಗುತ್ತಿದೆ.
ಹೀಗಾಗಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ನಗರದ ಹೊರವಲಯದಿಂದ ಒಳಗಿನ ವೃತ್ತದವರೆಗೆ ಏಳು ಹಂತದ ಭದ್ರತಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಶೇಷ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಇದರೊಂದಿಗೆ ಪೊಲೀಸರು ಮಾರುವೇಷದಲ್ಲಿ ಎಂದರೆ ಸಮವಸ್ತ್ರ ಧರಿಸದೆಯೇ ಅಯೋಧ್ಯೆಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಈ ಕುರಿತಾಗಿ ಅಯೋಧ್ಯೆ ಎಸ್ಎಸ್ಪಿ ಶೈಲೇಶ್ ಪಾಂಡೆ ಅವರು ಮಾಹಿತಿಯನ್ನು ನೀಡಿದ್ದಾರೆ. ಕಳೆದ ವರ್ಷ ಒಟ್ಟು 5,84,572 ದೀಪಗಳನ್ನು ಸರಯೂ ನದಿ ದಂಡೆಯಲ್ಲಿ ಬೆಳಗಿಸಲಾಗಿತ್ತು. ಅದು ಗಿನ್ನೀಸ್ ದಾಖಲೆಯನ್ನು ಕೂಡ ನಿರ್ಮಿಸಿತ್ತು. ಆದರೆ ಈ ಬಾರಿ ಆ ದಾಖಲೆಯು ಮುರಿದು ಬೀಳಲಿದ್ದು, ಹೊಸ ದಾಖಲೆ ಸೃಷ್ಟಿಯಾಗಲಿದೆ.
ಅಯೋದ್ಯೆಯಲ್ಲಿ ದೀಪಾವಳಿ ಆಚರಣೆಯ ನಿಮಿತ್ತ ಶ್ರೀರಾಮಾಯಣ ಕಥೆಯನ್ನು ಪ್ರಸ್ತುತಪಡಿಸಲಾಗುವುದು. ಭಗವಾನ್ ರಾಮ, ಲಕ್ಷ್ಮಣ, ಸೀತಾ ದೇವಿ ಪಾತ್ರಧಾರಿಗಳು ಹೆಲಿಕಾಪ್ಟರ್ ಮೂಲಕ ಅಯೋಧ್ಯೆಗೆ ಆಗಮಿಸಿದಾಗ ಅವರನ್ನು ಸಿಎಂ ಆದಿತ್ಯನಾಥ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ.
ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ ಸಿಎಂ ಯೋಗಿ ಆದಿತ್ಯ ನಾಥ್, ಈ ಬಾರಿಯ ದೀಪಾವಳಿಯನ್ನು ಬಡ ಕುಟುಂಬದವರ ಜೊತೆಗೂಡಿ ಆಚರಣೆ ಮಾಡುವಂತೆ ಕರೆ ನೀಡಿದ್ದಾರೆ. ಬಡ ಕುಟುಂಬಗಳಿಗೂ ಸಿಹಿಯನ್ನು ಹಂಚಿ ಅವರೊಂದಿಗೆ ಹಣತೆ ಬೆಳಗಿ ಎಂದು ಹೇಳಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments