ರಾಷ್ಟ್ರೀಯ ಏಕತಾ ದಿನ ಅಕ್ಟೋಬರ್ -31: ದೇಶ ಒಗ್ಗೂಡಿಸಿದ ಉಕ್ಕಿನ ಮನುಷ್ಯನನ್ನು ಸ್ಮರಿಸಿಕೊಂಡ ರಾಷ್ಟ್ರ

Ad Code

ರಾಷ್ಟ್ರೀಯ ಏಕತಾ ದಿನ ಅಕ್ಟೋಬರ್ -31: ದೇಶ ಒಗ್ಗೂಡಿಸಿದ ಉಕ್ಕಿನ ಮನುಷ್ಯನನ್ನು ಸ್ಮರಿಸಿಕೊಂಡ ರಾಷ್ಟ್ರ


ಪ್ರತಿ ವರ್ಷ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಐಕ್ಯತಾ ದಿನ ಎಂದು ಆಚರಿಸಲಾಗುತ್ತದೆ. ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಶ್ರೀ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ಶತಾಬ್ದಿಯ ನೆನಪಿಗಾಗಿ ಈ ಆಚರಣೆಯನ್ನು 2014 ರಲ್ಲಿ ಭಾರತ ಸರಕಾರ ಆರಂಭಿಸಿತ್ತು. ಬ್ರಿಟಿಷರನ್ನು ಭಾರತದಿಂದ ಒಡ್ಡೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಎದ್ದುಕಾಣುವ ಹೆಸರೇ ಸರ್ದಾರ್ ವಲ್ಲಭ ಭಾಯಿ ಪಟೇಲ್.


1928 ರ ಬಾರ್ಡೊಲಿ ಸತ್ಯಾಗ್ರಹದಲ್ಲಿ ವಲ್ಲಭ ಭಾಯಿ ಪಟೇಲರು ತೋರಿದ ಅಸಾಧಾರಣಾ ಧೈರ್ಯ ಮತ್ತು ಚಾಕಚಕ್ಯತೆಗೆ ಮಾರು ಹೋದ ಮಹಿಳೆಯರು, ಅವರಿಗೆ ಸರ್ದಾರ ಎಂಬ ಬಿರುದನ್ನು ನೀಡಿದ್ದರು. ಸ್ವಾತಂತ್ರ್ಯ ನಂತರ ದಿನಗಳಲ್ಲಿ ಅಖಂಡ ಭಾರತದ ಕನಸನ್ನು ಕಂಡು ತುಂಡು ತುಂಡಾಗಿದ್ದ ಭಾರತದ ಭಾಗಗಳನ್ನು ಒಗ್ಗೂಡಿಸಿ ಸುಮಾರು 550 ತುಂಡರಸರ ಮನವೊಲಿಸಿ ಅಖಂಡ ಪ್ರಜಾಪ್ರಭುತ್ವವಾದಿ ಭಾರತದ ಜನುಮಕ್ಕೆ  ಕಾರಣೀಭೂತರಾದವರೇ ಶ್ರೀ ಸರ್ದಾರ್ ಪಟೇಲರು. 1875 ರಲ್ಲಿ ಜನಿಸಿದ ಪಟೇಲರು ತಮ್ಮ 75ನೇ  ವಯಸ್ಸಿನಲ್ಲಿ  1950ರಲ್ಲಿ ಹೃದಯಸ್ತಂಭನದಿಂದ ಮುಂಬೈನಲ್ಲಿ ಮರಣಿಸಿದರು. ವೃತ್ತಿಯಿಂದ ಖ್ಯಾತ ವಕೀಲರಾಗಿದ್ದ ಪಟೇಲರು ಭಾರತದ ಮೊದಲ ಗೃಹಮಂತ್ರಿಯಾಗಿಯೂ ಕೆಲಸ ಮಾಡಿದ್ದರು. 1947ರ  ಭಾರತ ಪಾಕಿಸ್ತಾನದ ಯುದ್ಧದ ಸಮರದಲ್ಲಿಯೂ ಅವರೇ ಭಾರತದ ಗೃಹ ಸಚಿವರಾಗಿದ್ದರು. ಒಂದಷ್ಟು ಕಾಲ ಭಾರತದ ಉಪಪ್ರಧಾನಿಯಾಗಿಯೂ ನೆಹರೂ ಅವರ ಜೊತೆ ಕೆಲಸ ಮಾಡಿದ್ದರು.


ಏನಿದು ಏಕತೆಯ ವಿಗ್ರಹ?

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿ ಅಖಂಡ ಭಾರತದ ಕನಸು ಕಂಡು ಅದನ್ನು ಸಾಕಾರಗೊಳಿಸುವಲ್ಲಿ  ಹಗಲಿರುಳು ಅವಿರತ ಪರಿಶ್ರಮ ಪಟ್ಟು, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ‘ಪ್ರಜಾಪ್ರಭುತ್ವವಾದಿ’ ಸ್ವತಂತ್ರ ಭಾರತದ ಮೊದಲ ಉಪಪ್ರಧಾನಿ ಮತ್ತು ಮೊದಲ ಗೃಹಸಚಿವರಾದ ಉಕ್ಕಿನ ಮನುಷ್ಯ ಎಂಬ ಅನ್ವರ್ಥನಾಮದಿಂದ ದೇಶದಾದ್ಯಂತ ಚಿರಪರಿಚಿತರಾದ ಶ್ರೀಮಾನ್ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಸಾಧನೆ ಮತ್ತು ಕಾಣಿಕೆಯನ್ನು ಯುವಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಭಾರತ ಸರಕಾರ ಅಕ್ಟೋಬರ್-31, 2018 ರಂದು ಪಟೇಲರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಜಗತ್ತಿನ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯನ್ನು ಈ ಪ್ರತಿಮೆ ಪಡೆದುಕೊಂಡಿದೆ.


ಪ್ರತಿಮೆಯ ವಿಶೇಷತೆಗಳು:

1) ಅತೀ ಕಡಿಮೆ ಅವಧಿಯಲ್ಲಿ ಈ ವಿಗ್ರಹ ಸ್ಥಾಪನೆ ಆಗಿರುವ ದಾಖಲೆ ಹೊಂದಿದೆ. 42 ತಿಂಗಳುಗಳ  ಅವಧಿಯಲ್ಲಿ ನಿರ್ಮಿಸಲು ಯೋಜನೆ ಹಾಕಿ ಕೇವಲ 33 ತಿಂಗಳುಗಳಲ್ಲಿ ನಿರ್ಮಾಣ ಮಾಡಲಾಯಿತು.


2) ಜಗತ್ತಿನ ಅತೀ ಎತ್ತರದ ಈ ವಿಗ್ರಹದಲ್ಲಿ 153 ಮೀಟರ್ ಎತ್ತರದಲ್ಲಿ ಸುತ್ತಲಿನ ವಿಹಂಗಮ ನೋಟ ನೋಡಲು ಗ್ಯಾಲರಿ ಇರುತ್ತದೆ. ಸುಮಾರು 200 ಮಂದಿ ಏಕಕಾಲಕ್ಕೆ ವಿಹಂಗಮ ನೋಟ ವೀಕ್ಷಿಸಬಹುದಾಗಿದೆ.


3) ಗಾಳಿ, ಭೂಕಂಪವನ್ನು ತಡೆಗಟ್ಟಲು ವಿಶೇಷ ತಂತ್ರಜ್ಞಾನದಿಮದ ಈ ವಿಗ್ರಹ ನಿರ್ಮಿಸಲಾಗಿದೆ. ಸೆಕೆಂಡಿಗೆ 60 ಮೀಟರ್ ವೇಗದ ಗಾಳಿಯನ್ನು ತಡೆಯುವ ಶಕ್ತಿ ಹೊಂದಿದೆ. 6.5 ರಿಕ್ಟರ್ ಮಾಪನದಷ್ಟು ತೀವ್ರತೆಯಲ್ಲಿ ಭೂಕಂಪವನ್ನು ತಡೆಯುವ ಶಕ್ತಿ ಹೊಂದಿದೆ.


4) ಈ ವಿಗ್ರಹದಿಂದ ಸರ್ದಾರ್ ಸರೋವರ ಅಣೆಕಟ್ಟನ್ನು 200 ಕಿ.ಮೀ ದೂರದ ವರೆಗೆ ವೀಕ್ಷಿಸಬಹುದಾಗಿದೆ. ಸತ್ಪುರ ಮತ್ತು ವಿಂಧ್ಯ ಪರ್ವತ ಶ್ರೇಣಿಗಳನ್ನು ಈ ವಿಗ್ರಹದ ಗ್ಯಾಲರಿಯಿಂದ ವೀಕ್ಷಿಸಬಹುದಾಗಿದೆ.


5) ಈ ವಿಗ್ರಹದ ನಿರ್ಮಾಣಕ್ಕಾಗಿ 5700 ಮೆಟ್ರಿಕ್ ಟನ್ ಕಬ್ಬಿಣ ಮತ್ತು ಭದ್ರತೆಗಾಗಿ 18500 ಮೆಟ್ರಿಕ್ ಕಬ್ಬಿಣವನ್ನು ಬಳಸಲಾಗಿದೆ. ಪ್ರತಿಮೆಯ ಹೊರಭಾಗಕ್ಕೆ ಕಂಚಿನ ಲೇಪನ ಮಾಡಲಾಗಿದೆ.


6) ಜಗತ್ತಿನ ಅತೀ ದೊಡ್ಡ ಈ ವಿಗ್ರಹ ಸ್ಥಾಪನೆಗೆ “ಲೋಹ ಸಂಗ್ರಹ ಆಂದೋಲನ” ಮಾಡಿ ಲೋಹ ಸಂಗ್ರಹ ಮಾಡಲಾಗಿತ್ತು. ಹೀಗೆ ಸಂಗ್ರಹಿಸಿದ ಲೋಹವನ್ನು ಕರಗಿಸಿ, ಸರಳುಗಳನ್ನಾಗಿ ಮಾಡಿ ವಿಗ್ರಹ ನಿರ್ಮಾಣಕ್ಕೆ  ಬಳಸಲಾಗಿದೆ.


7) ಈ ವಿಗ್ರಹ ನಿರ್ಮಾಣದಿಂದಾಗಿ 15000 ಮಂದಿ ಆದಿವಾಸಿ ಜನಾಂಗದವರಿಗೆ ನೇರ ಉದ್ಯೋಗ ದೊರಕುವಂತಾಗಿದೆ.


8) ಈ ವಿಗ್ರಹದ ನಿರ್ಮಾಣ ವಿನ್ಯಾಸ, ತಂತ್ರಜ್ಞಾನ ಮತ್ತು ನಿರ್ವಹಣೆಯನ್ನು ಲಾರ್ಸ್‍ನ್ ಮತ್ತು ಟೂಬ್ರೊ ಕಂಪೆನಿ ವಹಿಸಿಕೊಂಡಿದೆ. 2989 ಕೋಟಿ ರೂಪಾಯಿಯ ವೆಚ್ಚದಲ್ಲಿ ಈ ವಿಗ್ರಹವನ್ನು ನಿರ್ಮಿಸಲಾಗಿದೆ.


9) ಜಗತ್ತಿನ ಅತೀ ಎತ್ತರದ ವಿಗ್ರಹವಾಗಿರುವ ಈ ಏಕತಾ ವಿಗ್ರಹ 182 ಮೀಟರ್ ಎತ್ತರ ಇದೆ. ನರ್ಮದಾ ನದಿ ತೀರದಲ್ಲಿ ಈ ವಿಗ್ರಹ ಸ್ಥಾಪನೆಯಾಗಿದೆ. ಚೀನಾದ ಬುದ್ಧನ ಸ್ಪ್ರಿಂಗ್ ದೇವಾಲಯ 153 ಮೀಟರ್ ಮತ್ತು ಜಪಾನಿ ಉಳಿತು ದೈಬುಸ್ತು ವಿಗ್ರಹ 120 ಮೀಟರ್ ಇದ್ದು, ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಹೊಂದಿದೆ.


10) ಈ ವಿಗ್ರಹದ ವಿನ್ಯಾಸವನ್ನು ಖ್ಯಾತ ಶಿಲ್ಪಿ ಪದ್ಮಶ್ರೀ, ಪದ್ಮಭೂಷಣ ರಾಮ್‍ಸುತಾರ್ ಮಾಡಿರುತ್ತಾರೆ. ಪಾರ್ಲಿಮೆಂಟಿನಲ್ಲಿರುವ ಗಾಂಧೀಜಿ ಪ್ರತಿಮೆಯನ್ನೂ ಇವರೇ ಮಾಡಿರುತ್ತಾರೆ.


ನರ್ಮದಾ ನದಿ ತಟದ, ಸಾದು ಬೆಟ್ಟದ ತಪ್ಪಲಿನಲ್ಲ್ಲಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಮುಖ ಮಾಡಿ ಈ ವಿಗ್ರಹ ನಿಂತಿದೆ. ವಡೋದರ ನಗರದಿಂದ 100 ಕಿ.ಮೀ. ದೂರದ ನರ್ಮದಾ ಜಿಲ್ಲೆಯ ಕೇವದಿಯ ಗ್ರಾಮದಲ್ಲಿ  ಈ ವಿಗ್ರಹ ತಲೆ ಎತ್ತಿ ನಿಂತಿದೆ.


ವಿಗ್ರಹದ ವಿಶೇಷತೆಗಳು:

182 ಮೀಟರ್‍ನ ಈ ವಿಗ್ರಹವನ್ನು 5 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲಿ 3 ವಲಯಗಳನ್ನು ವೀಕ್ಷಕರ ವೀಕ್ಷಣೆಗೆ ತೆರೆಯಲಾಗಿದೆ. ಮೊದಲನೆ ವಲಯ, ಭೂ ಮಟ್ಟದಿಂದ ಕಾಲುಗಳ ಮೀನಖಂಡದ ಎತ್ತರದ ವರೆಗೆ ವಿಸ್ತರಿಸಿದೆ. ಈ ವಲಯದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್‍ರ ಜೀವನ ಚರಿತ್ರೆ, ಅವರ ಸಾಧನೆ, ಅವರ ಕೊಡುಗೆ ಬಗ್ಗೆ ವಿವರಣೆ ನೀಡಲಾಗಿದೆ ಮತ್ತು ಅವರ ಸ್ಮರಣಾರ್ಥ ಗಾರ್ಡನ್ ನಿರ್ಮಿಸಲಾಗಿದೆ. ಎರಡನೇ ವಲಯದಲ್ಲಿ ವಿಗ್ರಹದ ತೊಡೆಯ ಭಾಗದ ವರೆಗೆ ಅಂದರೆ ಸುಮಾರು 150 ಮೀಟರ್ ವರೆಗೆ  ವಿಸ್ತರಿಸಿದೆ. ನಂತರದ ಹಂತ ಮೂರನೇ ವಲಯವಾಗಿದೆ. ಅದು ಸುಮಾರು 350 ಮೀಟರ್ ವರೆಗೆ ವಿಸ್ತರಿಸಿದೆ. ಈ ವಲಯದಲ್ಲಿ ವೀಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ. ಈ ವೀಕ್ಷಕರ ವಲಯದಿಂದ ನರ್ಮದಾ ನದಿಯ ಮತ್ತು ಸರ್ದಾರ್ ಸರೋವರ ಅಣೆಕಟ್ಟಿನ ವಿಹಂಗಮ ನೋಟವನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಅದೇ ರೀತಿ ವಿಂದ್ಯ ಮತ್ತು ಸತ್ಪುರ ಪರ್ವತ ಶ್ರೇಣಿಯನ್ನು ವೀಕ್ಷಿಸಬಹುದಾಗಿದೆ. ವಲಯ 4 ಮತ್ತು ವಲಯ 5 ವೀಕ್ಷಣೆಗೆ ಅವಕಾಶವಿರುವುದಿಲ್ಲ. ಈ ವಲಯವನ್ನು ನಿರ್ವಹಣಾ ವಲಯ ಎಂದು ಗುರುತಿಸಲಾಗಿದೆ.


ಒಟ್ಟಿನಲ್ಲಿ ಈ ಐಕ್ಯತಾ ವಿಗ್ರಹ ಭಾರತದ ಒಂದು ಐತಿಹಾಸಿಕ ಸ್ಮಾರಕ ಎಂದು ಜಗತ್‍ಪ್ರಸಿದ್ಧವಾಗಿರುವುದಂತೂ ಸತ್ಯವಾದ ಮಾತು. ದಿನವೊಂದರಲ್ಲಿ ಏನಿಲ್ಲವೆಂದರೂ ಹತ್ತು ಸಾವಿರ ಮಂದಿ ಈ ವಿಗ್ರಹವನ್ನು ವೀಕ್ಷಿಸಲು  ಬರುತ್ತಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈ ವಿಗ್ರಹದ ಸಮೀಪದಲ್ಲಿಯೇ ಶ್ರೇಷ್ಠ ಭಾರತ ಭವನ ಎಂಬ ಸುಸಜ್ಜಿತ ಹೊಟೇಲನ್ನು ನಿರ್ಮಿಸಲಾಗಿದೆ. ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿಯೇ ಇದನ್ನು ನಿರ್ಮಿಸಲಾಗಿದೆ. ಪ್ರತಿದಿನ ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಈ ವಿಗ್ರಹ ವೀಕ್ಷಣೆಗೆದ ಲಭ್ಯವಿದೆ. ವಿಗ್ರಹ ನಿರ್ವಹಣೆಗಾಗಿ ಸೋಮವಾರ ರಜಾ ದಿನವಾಗಿರುತ್ತದೆ. ಈ ವಿಗ್ರಹ ವೀಕ್ಷಣೆಗೆ ವಯಸ್ಕರಿಗೆ 350 ರೂ. ಮತ್ತು ಮಕ್ಕಳಿಗೆ 150 ರೂ. ನಿಗದಿಪಡಿಸಲಾಗಿದ್ದು, ಅಂತರ್ಜಾಲದ ಮುಖಾಂತರ ಟಿಕೆಟ್ ಪಡೆಯಬಹುದಾಗಿದೆ.


ಕೊನೆಮಾತು:  

ರಾಷ್ಟ್ರೀಯ ಐಕ್ಯತೆಗೂ ವಿಗ್ರಹ ನಿರ್ಮಾಣಕ್ಕೂ ಏನಪ್ಪಾ ಸಂಬಂಧ ಎಂದು ಹಲವಾರು ಮಂದಿ ಟೀಕೆ ಮಾಡಿರುವುದಂತೂ ಎಲ್ಲರಿಗೂ ತಿಳಿದ ವಿಚಾರವೇ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವಿಗ್ರಹ ಸ್ಥಾಪನೆ ಮಾಡಿ ರಾಷ್ಟ್ರೀಯ ಐಕ್ಯತೆ ಸಾಧಿಸುವುದು ಸಾಧ್ಯವಾದಲ್ಲಿ ದೇಶದೆಲ್ಲೆಡೆ ಎಲ್ಲರ ವಿಗ್ರಹ ಹುಟ್ಟಿಕೊಳ್ಳಬಹುದು ಎಂದು ಟೀಕಾಕಾರರು ಟೀಕಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಓರ್ವ ರಾಜಕಾರಣಿಯ ಮೂರ್ತಿಯನ್ನು ರಾಜ್ಯದೆಲ್ಲೆಡೆ ಸ್ಥಾಪಿಸಿ ವಿವಾದಕ್ಕೀಡಾಗಿರುವುದೂ ನಮಗೆ ತಿಳಿದಿದೆ. ಇಲ್ಲಿ ವಿಗ್ರಹ ಸ್ಥಾಪನೆಗಿಂತಲೂ ವ್ಯಕ್ತಿಯ ಸಾಧನೆ ಮತ್ತು  ವ್ಯಕ್ತಿತ್ವವನ್ನು ಜನರಿಗೆ ತಿಳಿಸುವ ಕಾರ್ಯ ನಡೆಯಬೇಕು. 1875 ರಲ್ಲಿ ಜನಿಸಿ 1950 ರಲ್ಲಿ ಇಹಲೋಕ ತ್ಯಜಿಸಿದ  ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ವ್ಯಕ್ತಿತ್ವದ ಅನಾವರಣ. ನಮ್ಮ ಈಗಿನ ಯುವ ಪೀಳಿಗೆಗೆ ತಿಳಿಸಿ ಹೇಳುವ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಅವರ ಛಲ, ಎದೆಗಾರಿಕೆ, ವೃತ್ತಿಪರತೆ, ಪ್ರಾಮಾಣಿಕತನ, ದೇಶಪ್ರೇಮ ಮತ್ತು ಸ್ವಾತಂತ್ರ್ಯ ಪಡೆದು ಅಖಂಡ ಭಾರತ ನಿರ್ಮಾಣ ಆಗಲೇಬೇಕು ಎನ್ನುವ ನಿಷ್ಠೆ ನಮ್ಮ ಯುವಕರಿಗೆ ತಿಳಿಸಿಕೊಡಬೇಕಾಗಿದೆ. ಅವರ ಜೀವನದ ಏಳುಬೀಳುಗಳು, ಕಲಿಕೆಯ ಕಷ್ಟಗಳು ಮತ್ತು ಸಾಧಿಸಿಯೇ ತೀರಬೇಕು ಎನ್ನುವ ಛಲ ಬಿಡದ ತ್ರಿವಿಕ್ರಮನಂತಹ ಎದೆಗಾರಿಕೆ ನಮ್ಮ ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಬೇಕು.


ಈ ನಿಟ್ಟಿನಲ್ಲಿ ಸರ್ದಾರ ಪಟೇಲರ “ಏಕತೆಯ ಮೂರ್ತಿ” ಪ್ರತಿಯೊಬ್ಬ ಭಾರತೀಯರಿಗೆ ಸ್ಫೂರ್ತಿ ನೀಡಿ ತಾನು ದೇಶಕ್ಕಾಗಿ ಏನಾದರೂ ಮಾಡಲೇಬೇಕು ಎನ್ನುವ ತುಡಿತವನ್ನು ಮುಟ್ಟಿಸುವಲ್ಲಿ ಸಂಶಯವೇ ಇಲ್ಲ. ಅವರು ಯಾವ ಜಾತಿ ಯಾವ ಪಕ್ಷ, ಯಾವ ರಾಜ್ಯದವರು ಅನ್ನುವುದಕ್ಕಿಂತ ಅವರೊಬ್ಬ ದೇಶಪ್ರೇಮ ಭಾರತೀಯ ಎಂಬ ಸಂದೇಶ ನಮ್ಮ ಯುವಪೀಳಿಗೆಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಅವರ ಏಕತಾ ಮೂರ್ತಿಯನ್ನು ಕಣ್ತುಂಬಿಕೊಂಡು ಅವರು ಹಾಕಿದ ಆದರ್ಶ ನಿಷ್ಠೆ ಪ್ರಾಮಣಿಕತೆ ಮತ್ತು ದೇಶ ಪ್ರೇಮದ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ಹಾಗಾದಲ್ಲಿ ಮಾತ್ರ “ಏಕತಾ ಮೂರ್ತಿ” ನಿರ್ಮಾಣದ ಉದ್ದೇಶ ಸಾಫಲ್ಯವಾಗಬಹುದು ಮತ್ತು “ರಾಷ್ಟ್ರೀಯ ಏಕತಾ ದಿವಸದ ಆಚರಣೆ” ಸಾರ್ಥಕವಾಗಬಹುದು. ಅದರಲ್ಲಿಯೇ ನಮ್ಮ ದೇಶದ ಹಿತ ಅಡಗಿದೆ.


-ಡಾ|| ಮುರಲೀಮೋಹನ ಚೂಂತಾರು

BDS, MDS,DNB,MOSRCSEd(U.K), FPFA, M.B.A

ಸಮಾದೇಷ್ಟರು, 

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ

ಮಂಗಳೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments