ಮಹಿಳೆಯರಿಗೆ ಪ್ರೇರಣೆಯಾಗಬಲ್ಲ ಜಸ್ವಂತಿಬೆನ್ ಜಮ್ನಾದಾಸ್ ಪೋಪಟ್

Ad Code

ಮಹಿಳೆಯರಿಗೆ ಪ್ರೇರಣೆಯಾಗಬಲ್ಲ ಜಸ್ವಂತಿಬೆನ್ ಜಮ್ನಾದಾಸ್ ಪೋಪಟ್

 

'ಜಸ್ವಂತಿಬೆನ್ ಜಮ್ನಾದಾಸ್ ಪೋಪಟ್' ಈ ಹೆಸರಲ್ಲೇ ಪಾಪಡ್ ಘಮಿಸುತ್ತಿದೆ ಅಲ್ಲವೇ ? ಈ ಹೆಸರಿನ ವ್ಯಕ್ತಿ ಯಾರು ಎಂಬುದು ತಕ್ಷಣಕ್ಕೆ ತಿಳಿಯದೇ ಹೋದರೂ ಲಿಜ್ಜತ್ ಪಾಪಡ್ ಎಂದಾಕ್ಷಣ ಈ ಸಾಧಕಿಯು ತಟ್ಟನೆ ನೆನಪಾಗುತ್ತಾರೆ. 'ಲಿಜ್ಜತ್ ಪಾಪಡ್ - ಉತ್ತಮ ಗುಣಮಟ್ಟದ ಹಪ್ಪಳಗಳು' ಈ ಸಂಸ್ಥೆಯ ಸಂಸ್ಥಾಪಕಿ ಇವರೇ ಜಸ್ವಂತಿಬೆನ್ ಪೋಪಟ್. ಅನೇಕ ಮಹಿಳೆಯರಿಗೆ ಪ್ರೇರಣೆ ನೀಡಿದಾಕೆ.


ಮಹಿಳೆಯು ಸ್ವಾವಲಂಬಿಯಾಗಬೇಕು ಹಾಗೂ ಆತ್ಮವಿಶ್ವಾಸದಿಂದ ಇರಬೇಕು" ಎಂಬ ಉನ್ನತ ಧ್ಯೇಯ,  ಉದ್ದೇಶದಿಂದ ಬರೀ ಏಳು ಜನ ಮಹಿಳೆಯರೊಂದಿಗೆ ಸೇರಿ ಕೇವಲ 80 ರೂಪಾಯಿ ಹಣವನ್ನು ಸಾಲವನ್ನಾಗಿ ಪಡೆದುಕೊಂಡು ಮನೆಯ ಮಾಳಿಗೆಯಲ್ಲಿ ಹಪ್ಪಳ ಮಾಡಲು ಪ್ರಾರಂಭಿಸಿದ ಸಂಸ್ಥೆ ಇದು. ಈ 'ಶ್ರೀ ಮಹಿಳಾ ಗೃಹ ಉದ್ಯೋಗ'  ಇಂದು ವರ್ಷಕ್ಕೆ 650 ಕೋಟಿ ರೂಪಾಯಿ ವರಮಾನವನ್ನು ಸಂಪಾದನೆ ಮಾಡುತ್ತಿದೆ. ಮಾತ್ರವಲ್ಲದೇ ಈ ಸಂಸ್ಥೆ ನೂರಾರು ಹೆಣ್ಣು ಮಕ್ಕಳ ಜೀವನ ಪಥವನ್ನೇ ಬದಲಿಸಿದೆ.


ಜಸ್ವಂತಿಬೆನ್ ಪೋಪಟ್ ತುಂಬಾ ಕಲಿತವರಲ್ಲ. ಇವರಿಗೆ ಓದಲು ಹಾಗೂ ಬರೆಯಲು ಬರುತ್ತದೆ. ಅಡುಗೆ ಕೆಲಸ ಬಿಟ್ಟು ಬೇರೆ ಪ್ರಪಂಚ ಇವರಿಗೆ ತಿಳಿದಿಲ್ಲ. ಆದರೆ ಇವರ ಒಂದು ಗುರಿ, ಧ್ಯೇಯ, ಕನಸು, ಛಲ ಇವರನ್ನು ಹಾಗೂ ಇವರನ್ನು ನಂಬಿ ಕೈಜೋಡಿಸಿದ ಮಹಿಳೆಯರನ್ನು ದೊಡ್ಡ ಮಟ್ಟಕ್ಕೆ ಕರೆದೊಯ್ಯಿತು.


ಈ ಸಂಸ್ಥೆಯು ಅಂಬೆಗಾಲಿಡುತ್ತಿದ್ದ ಸಂದರ್ಭದಲ್ಲಿ ಬಂದೊದಗಿದ ಸಂಕಷ್ಟಗಳು ಹಲವು. ಮಳೆಗಾಲದ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಹಪ್ಪಳ ತಯಾರಿಕೆಯನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಈ ಸಂಸ್ಥೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಾಗ ಮನೆಯ ಮಾಳಿಗೆಯು ಇವರ ಉದ್ಯಮಕ್ಕೆ ಸಾಲದಾಯಿತು.


ಎದುರಾದ ತೊಂದರೆಗಳಿಗೆ ಇವರು ಕುಗ್ಗದೆ, ಸರಳವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸತೊಡಗಿದರು. ಮಳೆಗಾಲದ ಅವಧಿಯಲ್ಲಿ ಮಂಚವನ್ನು ಬಳಸತೊಡಗಿದರು. ಮಂಚದ ಮೇಲೆ ಹಪ್ಪಳಗಳನ್ನು ಹರವಿ, ಕೆಳಗಡೆ ಸ್ಟೌವ್ ಉರಿಸಿ ಹಪ್ಪಳಗಳನ್ನು ಒಣಗಿಸತೊಡಗಿದರು. ಮಹಿಳೆಯರ ಸಂಖ್ಯೆ ಹೆಚ್ಚಾದಾಗ ಹಿಟ್ಟನ್ನು ಅವರು ಮನೆಗೆ ಕೊಂಡೊಯ್ದು ಮರುದಿನ ಹಪ್ಪಳಗಳನ್ನು ತಯಾರಿಸಿ ತಂದು ಕೊಡುತ್ತಿದ್ದರು. ಈ ರೀತಿಯಾಗಿ ಜಸ್ವಂತಿಬೆನ್ ಪೋಪಟ್ ತಮ್ಮ ಸಂಸ್ಥೆಯನ್ನು ದಿಟ್ಟತನದಿಂದ ಬೆಳೆಸುತ್ತಾ ಬಂದಿದ್ದಾರೆ.


ಒಬ್ಬ ವ್ಯಕ್ತಿ ತನ್ನ ವಿದ್ಯೆ, ಸಂಪತ್ತು, ಹಣ, ಅಧಿಕಾರ, ಅಂತಸ್ತಿನಿಂದ ಮೇಲ್ಮಟ್ಟಕ್ಕೆ ಬೆಳೆಯಲು ಖಂಡಿತಾ ಸಾಧ್ಯವಿಲ್ಲ. ಮುಖ್ಯವಾಗಿ ಸಾಧನೆಗೆ ಇವುಗಳ ಅಗತ್ಯವೂ ಇಲ್ಲ. ಸಾಧಿಸುವ ಛಲ ಒಂದಿದ್ದರೆ ನಡೆಯುವ ಹಾದಿಯಲ್ಲಿ ಯಶಸ್ಸು, ಗೆಲುವು ನಮ್ಮ ಕೈ ಹಿಡಿಯುತ್ತದೆ ಎಂಬುದಕ್ಕೆ ಜಸ್ವಂತಿಬೆನ್ ಪೋಪಟ್ ಅತ್ಯುತ್ತಮ ನಿದರ್ಶನವಾಗಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಕಾರಣರಾದ ಈ ಮಹಾನ್ ಸಾಧಕಿಗೆ ನಮ್ಮ ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರ ಪ್ರಾಪ್ತಿಯಾಗಿರುವುದು ಹೆಮ್ಮೆಯೇ ಸರಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments