ಪಣಜಿ: ದೇಶದ ಅತ್ಯಂತ ಸಣ್ಣ ರಾಜ್ಯ ಗೋವಾದಲ್ಲಿ ಫೆ.14 ರಂದು 40 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪ್ರಸಕ್ತ ಚುನಾವಣೆಯಲ್ಲಿ ಅತ್ಯಂತ ಉತ್ಸಾಹದಿಂದ ಮತದಾನ ನಡೆದಿರುವುದು ಕಂಡುಬಂದಿದೆ. ಕೆಲ ಘಟನೆಗಳನ್ನು ಹೊರತುಪಡಿಸಿದರೆ ರಾಜ್ಯಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಗೋವಾ ರಾಜ್ಯದಲ್ಲಿ ಒಟ್ಟೂ ಶೇ 78.94 ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆ ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ 11.04 ರಷ್ಟು ಮತದಾನವಾಗಿದೆ. ಮಧ್ಯಾನ್ಹ 11 ಗಂಟೆಯವರೆಗೆ ಶೇ 26.63 ರಷ್ಟು ಮತದಾನವಾಗಿದೆ. ಮಧ್ಯಾನ್ಹ 1 ಗಂಟೆಯವರೆಗೆ ಶೇ 44.63 ರಷ್ಟು ಮತದಾನವಾಗಿದೆ. ಮಧ್ಯಾನ್ಹ 3 ಗಂಟೆಯವರೆಗೆ ಶೇ 60.18 ರಷ್ಟು ಮತದಾನವಾಗಿದೆ. ಸಂಜೆ 5 ಗಂಟೆಯರೆಗೆ ಶೇ 75.29 ರಷ್ಟು ಮತದಾನವಾಗಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಈ ಎರಡು ಪಕ್ಷಗಳ ನಡುವೆ ನೇರ ಸ್ಫರ್ಧೆ ಏರ್ಪಟ್ಟಿತ್ತು. ಪಣಜಿ, ಮಾಂದ್ರೆ, ಮಡಗಾಂವ, ಪೊಂಡಾ, ಸಾಖಳಿ, ಈ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟ ಪ್ರಮುಖ ಕ್ಷೇತ್ರವಾಗಿತ್ತು. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಸಕ್ತ ಚುನಾವಣೆಯಲ್ಲಿ ಹೆಚ್ಚಿನ ಪ್ರಯತ್ನ ನಡೆಸಿದೆ. ಆದರೆ ಬಿಜೆಪಿ ವಿರೋಧಿ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಶತಪ್ರಯತ್ನ ನಡೆಸಿವೆ. ಇವರೆಲ್ಲರ ಭವಿಷ್ಯವನ್ನು ಮತದಾರರು ಬರೆದಿದ್ದು ಮತಯಂತ್ರದಲ್ಲಿ ಭಧ್ರವಾಗಿದೆ.
ಹಣಹಂಚುತ್ತಿರುವುದಾಗಿ ಗೊಂದಲ..!
ಟಿಎಂಸಿ ಅಭ್ಯರ್ಥಿ ವಾಲಂಕಾ ಅಲೆಮಾಂವ ರವರ ಸಹೋದರಿಯ ಮೇಲೆ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ವಾಲಂಕಾ ರವರ ಇಬ್ಬರು ಸಹೋದರಿಯರು ಮತದಾರರಿಗೆ ಆಮಿಷವೊಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ನಂತರ ಮತಗಟ್ಟೆಯ ಬಳಿ ವಾಗ್ವಾದವುಂಟಾಗಿ ಕೆಲ ಕಾಲ ಉದ್ವಿಗ್ನ ಸ್ಥಿತಿಯುಂಟಾಗಿತ್ತು. ಪೋಲಿಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸಿಎಂ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ:
ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಫರ್ಧಿಸಿರುವ ಸಾಖಳಿ ಕ್ಷೇತ್ರದಲ್ಲಿ ಗೋವಾದಲ್ಲಿಯೇ ಅತಿ ಹೆಚ್ಚು ಅಂದರೆ ಶೇ 88 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಮತದಾರರು ಯಾರಿಗೆ ಆಶೀರ್ವಧಿಸಲಿದ್ದಾರೆ ಎಂಬುದು ಮಾರ್ಚ 10 ಕ್ಕೆ ಖಚಿತವಾಗಲಿದೆ.
ಮಾಜಿ ಮುಖ್ಯಮಂತ್ರಿಗಳ ಭವಿಷ್ಯ...?
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ರವಿ ನಾಯ್ಕ, ದಿಗಂಬರ್ ಕಾಮತ್, ಚರ್ಚಿಲ್ ಅಲೆಮಾಂವ, ಲಕ್ಷ್ಮೀಕಾಂತ ಪಾರ್ಸೇಕರ್ ಈ ಮಾಜಿ ಮುಖ್ಯಮಂತ್ರಿಗಳು ತಮ್ಮ ಅದೃಷ್ಠ ಪರೀಕ್ಷೆ ನಡೆಸಿದ್ದು ಇವರ ತೀರ್ಪು ಮತಯಂತ್ರಕ್ಕೆ ಸೇರಿದೆ.
ಗೋವಾದಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟೂ 1722 ಮತ ಕೇಂದ್ರಗಳಲ್ಲಿ ಮತದಾನ ನಡೆದಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments