ಸ್ಥಳವನ್ನು ಸೀಲ್‌ಡೌನ್ ಮಾಡಲು ಕೋರ್ಟ್ ಆದೇಶ; ಸಿಆರ್‌ಪಿಎಫ್ ನಿಯೋಜನೆ
ವಾರಾಣಸಿ: ಕಾಶಿ ವಿಶ್ವನಾಥ ಧಾಮದಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ ಬೃಹತ್ ಗಾತ್ರದ ಶಿವಲಿಂಗ ಪತ್ತೆಯಾಗಿದೆ. ಸ್ಥಳೀಯ ಕೋರ್ಟ್ ಆದೇಶದ ಮೇರೆಗೆ ನಡೆಯುತ್ತಿರುವ ಸಮೀಕ್ಷೆಯ ವೇಳೆ ಈ ಮಹತ್ವದ ಬೆಳವಣಿಗೆ ನಡೆದಿದೆ.
ಮುಸ್ಲಿಂ ದಾಳಿಕೋರರು ದೇಶದ ನಾನಾ ಭಾಗಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಹಿಂದೂ ಮಂದಿರಗಳು ಮತ್ತು ಇತರ ಶ್ರದ್ಧಾ ಕೇಂದ್ರಗಳನ್ನು ನಾಶಪಡಿಸಿ ಮಸೀದಿಗಳನ್ನು ನಿರ್ಮಿಸಿದರು ಎಂಬ ಇತಿಹಾಸದ ದಾಖಲೆಗಳನ್ನು ಆಧರಿಸಿಯೇ ಕೋಟ್ಯಾಂತರ ಹಿಂದೂಗಳ ಶ್ರದ್ಧಾ ಕೇಂದ್ರವಾದ ವಾರಾಣಸಿಯಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಬೇಕೆಂಬ ಬೇಡಿಕೆ ಬಹುಕಾಲದಿಂದಲೂ ಇತ್ತು.
ಇದೀಗ ಕೋರ್ಟ್ ಆದೇಶದಂತೆ ಈ ಸಮೀಕ್ಷೆ ನಡೆಯುತ್ತಿದ್ದು, ಪ್ರತಿ ಹಂತದ್ಲೂ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ. ವಿವಾದಿತ ಕಟ್ಟಡದೊಳಗೆ ಶಿವಲಿಂಗ ತ್ರಿಶೂಲ, ಕಮಲದ ಹೂವು ಹಾಗೂ ದೇವಾಲಯದ ಕುರುಹುಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸೀಲ್‌ಡೌನ್ ಮಾಡುವಂತೆ ಸ್ಥಳೀಯಾಡಳಿತಕ್ಕೆ ಕೋರ್ಟ್ ಆದೇಶ ನೀಡಿದೆ.
ಸಮೀಕ್ಷೆ ಇಂದೂ ಸಹ ಮುಂದುವರಿದಿದ್ದು, ನಾಳೆ (ಮೇ 17) ಸಂಜೆಯೊಳಗೆ ಪೂರ್ಣಗೊಳಿಸಿ ಎಲ್ಲ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.
ಹಿಂದೂ ಪಕ್ಷದ ವಕೀಲ ಸುಭಾಶ್ ನಂದನ್ ಚತುರ್ವೇದಿ ಅವರು ಕಟ್ಟಡದೊಳಗೆ ಶಿವಲಿಂಗ ಪತ್ತೆಯಾಗಿರುವುದನ್ನು ಮೊದಲು ಮಾಧ್ಯಮಗಳಿಗೆ ಬಹಿರಂಗಪಡಿಸಿದರು. ಮಸೀದಿಯೊಳಗೆ ಭಗವಾನ್ ಶಿವನಿದ್ದಾನೆ (ಬಾಬಾ ಮಿಲ್ ಗಯೇ) ಎಂದು ಅವರು ತಿಳಿಸಿದರು.
ನ್ಯಾಯಾಲಯ ನೇಮಿಸಿದ ಅಧಿಕಾರಿ ತಂಡ ಈ ಸಮೀಕ್ಷೆ ನಡೆಸಿದ್ದು, ಸಮೀಕ್ಷಾ ಕಾರ್ಯ ಎಲ್ಲರಿಗೂ ತೃಪ್ತಿ ತಂದಿದೆ ಎಂದು ವಾರಾಣಸಿ ಜಿಲ್ಲಾ ದಂಡಾಧಿಕಾರಿ ಕೌಶಲ್ ರಾಜ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.
ಕೋರ್ಟ್ ಆದೇಶವನ್ನು ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಸ್ವಾಗತಿಸಿದ್ದಾರೆ.
ಕೋರ್ಟ್ ಆದೇಶವನ್ನು ಎಲ್ಲರೂ ಸ್ವಾಗತಿಸಬೇಕು ಮತ್ತು ಒಪ್ಪಿಕೊಳ್ಳಬೇಕು. ಹಾಗಿದ್ದರೂ ಹಿಂದೂ-ಮುಸ್ಲಿಂ ಸಮುದಾಯಗಳು ಪರಸ್ಪರ ಮಾತುಕತೆ ಮೂಲಕ ಇದನ್ನು ಇತ್ಯರ್ಥಪಡಿಸಿಕೊಂಡರೆ ಉತ್ತಮ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ಯಾಸೂಬ್ ಅಬ್ಬಾಸ್ ಪ್ರತಿಕ್ರಿಯಿಸಿದ್ದಾರೆ.
ಮಹಿಳೆಯರ ಗುಂಪೊಂದು ಕಟ್ಟಡದ ಹೊರ ಆವರಣದಲ್ಲಿ ಪ್ರತಿನಿತ್ಯ ದೇವತಾ ಪ್ರಾರ್ಥನೆ ಮತ್ತು ಪೂಜೆಗಳನ್ನು ನಡೆಸಲು ಅವಕಾಶ ನೀಡುವಂತೆ ಕೋರಿ ಮನವಿ ಸಲ್ಲಿಸಿದ ಬಳಿಕ ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರು, ಮಸೀದಿಯ ಒಳಗೆ-ಹೊರಗೆ ಸಂಪೂರ್ಣವಾಗಿ ವೀಡಿಯೋಗ್ರಾಫಿಕ್ ಸರ್ವೇ ನಡೆಸುವಂತೆ ಆದೇಶ ನೀಡಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments