ನಾನು ಇಂದು (ರವಿವಾರ ಮಾರ್ಚ್ 13) ಇಲ್ಲಿ ವರ್ಜೀನಿಯಾ ಸಂಸ್ಥಾನದ ಥಿಯೇಟರ್‌ನಲ್ಲಿ ವೀಕ್ಷಿಸಿದೆ. ಇದು ನೀವೂ ನೋಡಲೇಬೇಕಾದ ಚಿತ್ರ ಎನ್ನಲಿಕ್ಕೆ 8 ಪ್ರಬಲ ಕಾರಣಗಳನ್ನು ಕೊಡುತ್ತಿದ್ದೇನೆ:
1. ಕಾಶ್ಮೀರ ವಿವಾದ ಮತ್ತು 1990ರಲ್ಲಿ ಇಸ್ಲಾಂ ಉಗ್ರವಾದಿಗಳಿಂದ ನಡೆದ ಘೋರ ನರಮೇಧದ ಕರಾಳ ಸತ್ಯವನ್ನು ಯಾವುದೇ ಸಿನಿಮೀಯ ರಂಗುಗಳ ಲೇಪವಿಲ್ಲದೆ ‘ನಡೆದಿದ್ದನ್ನು ನಡೆದಿದ್ದಂತೆ’ ಚಲನಚಿತ್ರವಾಗಿ ತೋರಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಧೈರ್ಯ ಮತ್ತು ಸಾಹಸಗಳ ಸಾಕ್ಷಿಯಾಗಲಿಕ್ಕೆ.
2. ಅಂತಹ ಅಮಾನುಷ ಹಿಂಸೆ ದೌರ್ಜನ್ಯದ ವಿವರಗಳು ಇಷ್ಟು ವರ್ಷಗಳವರೆಗೆ ಏಕೆ ಮತ್ತು ಹೇಗೆ ಪ್ರಪಂಚದ ಅರಿವಿಗೆ ಬಾರದೆ ಉಳಿದವು ಎಂದು ತಿಳಿಯುವುದಕ್ಕೆ..
3. ಭಾರತ ಭೂಶಿರ ಕಾಶ್ಮೀರವು ‘ಭೂಲೋಕದ ಸ್ವರ್ಗ’ವಷ್ಟೇ ಅಲ್ಲ, ಭಾರತೀಯ ಸಂಸ್ಕೃತಿಯ ಜ್ಞಾನಕಣಜವಾಗಿ ಹೇಗೆ ಇದ್ದದ್ದು ಹೇಗಾಯ್ತು, ಹಂತಹಂತವಾಗಿ ನಾವು ಏನನ್ನು ಕಳೆದುಕೊಂಡೆವು ಎಂಬ ಅರಿವಾಗುವುದಕ್ಕೆ..
4. ನರಮೇಧದಲ್ಲಿ ತಮ್ಮ ಕಣ್ಮುಂದೆಯೇ ಮಡದಿ-ಮಕ್ಕಳು ಮನೆ-ಮಠ ಎಲ್ಲವನ್ನೂ ಕಳೆದುಕೊಂಡು ಬದುಕುಳಿದ ಕಾಶ್ಮೀರಿ ಹಿಂದೂಗಳ ಪ್ರತಿನಿಧಿಯಾಗಿಯೆಂಬಂತೆ ಪುಷ್ಕರನಾಥ ಪಂಡಿತ್‌ನ (ಅನುಪಮ್ ಖೇರ್‌ನ ಅತಿನೈಜ ಅಭಿನಯ) ಬಾಳಿನ ಬೇಗುದಿಯ ತೀವ್ರತೆ ನಮ್ಮೆಲ್ಲರ ಅಂತಃಕರಣವನ್ನು, ಆತ್ಮಸಾಕ್ಷಿಯನ್ನು ಅಲುಗಾಡಿಸಲಿಕ್ಕೆ..
5. ತಥಾಕಥಿತ ಸೆಕ್ಯುಲರಿಸ್ಟ್‌ಗಳು, ಬುದ್ಧಿಜೀವಿಗಳು, ಮತ್ತು ಮಾಧ್ಯಮಗಳು ಹೇಗೆ ‘ಕಾಶ್ಮೀರ ವಿವಾದ’ವನ್ನು ಶತಾಯಗತಾಯ ಜೀವಂತವಾಗಿಡಲಿಕ್ಕೆ ಹೆಣಗುತ್ತವೆ ಮತ್ತು ಯುವಪೀಳಿಗೆಯ ಬ್ರೈನ್‌ವಾಷ್ ಮಾಡಿ ದಾರಿತಪ್ಪಿಸುತ್ತವೆ ಎಂದು ಅವರೆಲ್ಲರ ಪ್ರತಿನಿಧಿಯಾಗಿ ಯುನಿವರ್ಸಿಟಿ ಪ್ರೊಫೆಸರ್ ರಾಧಿಕಾ ಮೆನನ್‌ಳ (ಪಲ್ಲವಿ ಜೋಶಿ ನಿರ್ವಹಿಸಿದ ಪಾತ್ರ) ಕುತ್ಸಿತ, ಸ್ವಾರ್ಥಿ, ಮತ್ತು ದೇಶದ್ರೋಹಿ ಮನಸ್ಸನ್ನು ಈಗಲಾದರೂ ಅರ್ಥಮಾಡಿಕೊಂಡು ಎಚ್ಚತ್ತುಕೊಳ್ಳಲಿಕ್ಕೆ..
6. ತನ್ನ ಹೆತ್ತವರು ಮತ್ತು ಅಣ್ಣ ‘ಸ್ಕೂಟರ್ ಆಕ್ಸಿಡೆಂಟ್‌ನಲ್ಲಿ ಸತ್ತರು’ ಎಂಬ ಸುಳ್ಳನ್ನೇ ಸತ್ಯವೆಂದು ನಂಬಿಕೊಂಡು ಬೆಳೆದ ಕೃಷ್ಣ ಪಂಡಿತ್ (ಅಭಿನಯ: ದರ್ಶನ ಕುಮಾರ್) ತನ್ನ ತಾತನಿಂದ ಮತ್ತು ತಾತನ ಒಡನಾಡಿಗಳಿಂದ ಸತ್ಯವನ್ನು ಅರಿತಮೇಲೆ, ಯುನಿವರ್ಸಿಟಿಯಲ್ಲಿ ಮಾಡುವ ‘ಭಾಷಣ’ದಲ್ಲಿ ತಾನೂ ಭಾವೋದ್ವೇಗದ ತುರೀಯಾವಸ್ಥೆ ತಲುಪಿ ನಿಮ್ಮನ್ನೂ ಅದೇ ಸ್ಥಿತಿಗೆ ಒಯ್ಯುವುದನ್ನು ಅನುಭವಿಸಿ ಸಂಪೂರ್ಣವಾಗಿ ಕರಗಿಹೋಗಲಿಕ್ಕೆ, ಕಣ್ಣೀರುಗರೆಯಲಿಕ್ಕೆ..
7. ಈ ಚಿತ್ರದ ಪ್ರಚಾರವೇನಿದ್ದರೂ word-of-mouth (ಬಾಯಿಂದ ಬಾಯಿಗೆ) ರೀತಿಯಲ್ಲೇ ಆಗಬೇಕಾಗಿರುವುದರಿಂದ ಅದರಲ್ಲಿ ನಿಮ್ಮ word ಮತ್ತು mouth ಸಹ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ..
8. ಇಂಡಿಯನ್ ಎಕ್ಸ್‌ಪ್ರೆಸ್ ಮತ್ತಿತರ ಕೆಲ ಮುಖ್ಯವಾಹಿನಿ ಪತ್ರಿಕೆಗಳು ಈ ಚಿತ್ರಕ್ಕೆ ಬೇಕಂತಲೇ 1 out of 5 stars ರೀತಿಯ ಕಳಪೆ rating ಕೊಟ್ಟಿರುವಾಗ ಅದನ್ನು ಸಾರಾಸಗಟಾಗಿ disprove ಮಾಡಿ ‘ಸತ್ಯ’ಕ್ಕೇ ಅಂತಿಮ ಜಯ ಎಂದು ಸಾರಲಿಕ್ಕೆ..
* * *
ನೀವು ಈಗಾಗಲೇ ಈ ಚಿತ್ರವನ್ನು ನೋಡಿದ್ದೀರಾದರೆ ನೀವೂ ಈ ಪಟ್ಟಿಗೆ ಅಂಶಗಳನ್ನು ಸೇರಿಸಬಹುದು; ನೋಡುವವರಿದ್ದೀರಾದರೆ ಒಂದು ಅನಿರ್ವಚನೀಯ ಅನುಭವಕ್ಕೆ ನಿಮ್ಮನ್ನು ಒಡ್ಡಿಕೊಳ್ಳುತ್ತೀದ್ದೀರಿ, ಯಾವುದೇ ಕಾರಣಕ್ಕೆ ತಪ್ಪಿಸಿಕೊಳ್ಳಬೇಡಿ.
- ಶ್ರೀವತ್ಸ ಜೋಷಿ, ವಾಷಿಂಗ್ಟನ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments