ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಮುಖ್ಯಮಂತ್ರಿಗಳು 10 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಮೂಲಕ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ನಮ್ಮೆಲ್ಲರ ಕನಸು ನನಸಾಗಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ಅಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.
ಅಖಿಲ ಗೋವಾ ಕನ್ನಡ ಮಹಾಸಂಘ ಗೋವಾ, ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ "ಗೋವಾ ಕಲಾ ಉತ್ಸವ" ಅಭಿನಂದನಾ ಸಮಾರಂಭ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿದ್ಧಣ್ಣ ಮೇಟಿ ಮಾತನಾಡುತ್ತಿದ್ದರು.
ಹಣವನ್ನು ಯಾರಾದರೂ ಗಳಿಸಬಹುದು, ಆದರೆ ಸಾಧನೆ ಮಾಡಿ ಪ್ರಶಸ್ತಿ ಗಳಿಸುವುದು ತುಂಬಾ ದೊಡ್ಡದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವೆಲ್ಲರೂ ಜಾತಿ, ಧರ್ಮ, ಬೇಧ ಭಾವವಿಲ್ಲದೆಯೇ ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ವಾಸ್ಕೊದ ವರುಣಾಪುರಿಯಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸುವ ಬಹು ದಿನಗಳ ಕನಸು ನನಸಾಗಬೇಕು ಎಂದು ಸಿದ್ಧಣ್ಣ ಮೇಟಿ ನುಡಿದರು.
ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿದ ವಿಸ್ ಇಂಡಿಯಾ ವಿಜೇತೆ ಡಾ. ಪೂಜಾ ರಮೇಶ ಮಾತನಾಡಿ- ಎಲ್ಲರೂ ನಮ್ಮ ನಮ್ಮ ಕೈಲಾದಷ್ಟು ಸಮಾಜಸೇವೆ ಮಾಡಬೇಕು. ಪುನೀತ್ ರಾಜಕುಮಾರ್ ರವರ ನಿಧನವು ನಮಗೆಲ್ಲಾ ತುಂಬಲಾರದ ನಷ್ಠವುಂಟುಮಾಡಿದೆ. ಪುನೀತ್ ರಾಜಕುಮಾರ್ ರವರು ಕೂಡ ಸಮಾಜದಲ್ಲಿ ಹಲವು ಒಳ್ಳೆಯ ಕೆಲಸ ಮಾಡಿದವರು. ಅವರ ಸಾಧನೆ ನಮಗೆಲ್ಲ ಸ್ಫೂರ್ತಿದಾಯಕವಾಗಿದೆ. ಗೋವಾದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕನ್ನಡಿಗರನ್ನು ನೋಡಿ ತುಂಬಾ ಖುಷಿಯಾಯಿತು. ಇಲ್ಲಿ ಬಂದು ಕನ್ನಡಿಗರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಅರವಿಂದ ಯಾಳಗಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಗೋವಾ ಕೇಸರಿ ಸಂಪಾದಕ ಶ್ರೀನಿವಾಸ್ ಪೈ, ಗೋವಾ ಕನ್ನಡ ದಿನಪತ್ರಿಕೆ ವರದಿಗಾರ ಪ್ರಕಾಶ ಭಟ್, ಕಾರ್ಯಕ್ರಮದ ಸಂಘಟಕ ಹಾಗೂ ಹಿರಿಯ ಪತ್ರಕರ್ತ ಮಾರುತಿ ಬಡಿಗೇರ, ಎಂ. ರಂಜಿತ್‍ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಿಸ್ ಇಂಡಿಯಾ ವಿಜೇತೆ ಡಾ. ಪೂಜಾ ರಮೇಶ, ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಣ್ಣ ಮೇಟಿ, ಗೋವಾ ಕೇಸರಿ ಸಂಪಾದಕ ಶ್ರೀನಿವಾಸ್ ಪೈ, ರವರ ಸಾಧನೆಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments