ಪಣಜಿ: ಗೋವಾ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಎರಡನೆಯ ಬಾರಿ ಪ್ರಮೋದ ಸಾವಂತ್ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸ್ಥಾನದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ.
ಗೋವಾ ವಿಧಾನಸಭಾ ಚುನಾವಣೆಯ ನಂತರ ಇದೀಗ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನೆಗಾಗಿ ನೂತನ ಮುಖ್ಯಮಂತ್ರಿಗಳ ಆಯ್ಕೆಗೆ ಕೇಂದ್ರ ವೀಕ್ಷಕರಾದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮತ್ತು ಪಶುಸಂಗೋಪನಾ ಖಾತೆಯ ರಾಜ್ಯ ಸಚಿವ ಎಲ್.ಮುರುಗನ್ ಗೋವಾಕ್ಕೆ ಆಗಮಿಸಿದ್ದು, ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಪಣಜಿಯಲ್ಲಿ ಬಿಜೆಪಿ ಸಚಿವ ಸಂಪುಟ ಸಭೆ ನಡೆಸಲಾಯಿತು.
ಕಳೆದ ಕೆಲವು ದಿನಗಳಿಂದ ಹಂಗಾಮಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಶಾಸಕ ವಿಶ್ವಜಿತ್ ರಾಭೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿತ್ತು. ಆದರೆ ಇದೀಗ ಬಿಜೆಪಿ ನಾಯಕರು ವಿಶ್ವಜಿತ್ ರಾಣೆಯವರ ಅಸಮಾಧಾನವನ್ನು ಹೋಗಲಾಡಿಸಿ ಪ್ರಮೋದ ಸಾವಂತ್ ರವರನ್ನು ವಿಧಾನಸಭೆಯ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಗೋವಾ ಬಿಜೆಪಿ ಪ್ರಭಾರಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಉಪಸ್ಥಿತರಿದ್ದು, ಎರಡನೇಯ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಾ. ಪ್ರಮೋದ ಸಾವಂತ್ ರವರನ್ನು ಅಭಿನಂದಿಸಿದರು.
ಹಾಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಶಾಸಕ ವಿಶ್ವಜಿತ್ ರಾಣೆ ಮುಖ್ಯಮಂತ್ರಿ ಸ್ಥಾನದ ರೇಸ್‍ನಲ್ಲಿದ್ದರು. ಈ ಗೊಂದಲದಿಂದಾಗಿ ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು 10 ದಿನ ಕಳೆದರೂ ಬಿಜೆಪಿ ನೇತೃತ್ವದ ನೂತನ ಸರ್ಕಾರ ಸ್ಥಾಪನೆ ಸಾಧ್ಯವಾಗಿರಲಿಲ್ಲ. ಕಳೆದ ಎರಡು ದಿನಗಳ ಹಿಂದಷ್ಟೇ ಪ್ರಮೋದ ಸಾವಂತ್ ಮತ್ತು ವಿಶ್ವಜಿತ್ ರಾಣೆ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಗೋವಾ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದ್ದು, ಎರಡನೇಯ ಬಾರಿ ಮುಖ್ಯಮಂತ್ರಿಯಾಗಿ ಡಾ. ಪ್ರಮೋದ ಸಾವಂತ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ.
ವರದಿ: ಪ್ರಕಾಶ್ ಭಟ್, ಗೋವಾ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments